....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Friday, 31 July 2015

ಜುಲೈ ತಿಂಗಳ ಬಾಲ ಸಭೆ

          ಜುಲೈ ತಿಂಗಳ ಬಾಲ ಸಭೆಯಲ್ಲಿ ತಿಂಗಳ ಹಸ್ತಪತ್ರಿಕೆ ಬಿಡುಗಡೆ ಹಾಗೂ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಕೆಲವೊಂದು ಕ್ಲಿಕ್ಕ್'ಗಳು...













Tuesday, 28 July 2015

ಅಗಲಿದ ಚೇತನ

ಭಾರತದ 11ನೇ ರಾಷ್ಟ್ರಪತಿ ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ನಮ್ಮನ್ನಗಲಿದ್ದಾರೆ. ಅಗಲಿದ ಚೇತನಕ್ಕೆ ಪುಷ್ಪಾರ್ಚನೆಯ ಮೂಲಕ ಶಾಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಅರಬಿಕ್ ಅಧ್ಯಾಪಕ ಅಬ್ದುಲ್ ಮಜೀದ್, ಅಧ್ಯಾಪಕ ಜಯಪ್ರಶಾಂತ್ ಪಿ ರವರು ಅಬ್ದುಲ್ ಕಲಾಂ ರವರ ಜೀವನಗಾಥೆಯನ್ನು ಮಕ್ಕಳ ಮುಂದೆ ತೆರೆದಿಟ್ಟು ನಮನವನ್ನು ಸಲ್ಲಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಭವ್ಯಶ್ರೀ ಯನ್, ಶ್ರೀಮತಿ ಗೀತಾ ಎ ಕಲಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

Monday, 27 July 2015

ಭಾವಪೂರ್ಣ ಶ್ರದ್ಧಾಂಜಲಿ

ಕಲಾಮ್ ಗೆ ಸಲಾಮ್

ಏನು ಹೇಳಲಿ ಈ ಮಹಾತ್ಮನಿಗೆ
ತೆರೆದಿಟ್ಟ ಶುಭ್ರ ಜೀವನವೇ
ನಮ್ಮ ಮುಂದಿದೆ ಸಂದೇಶವಾಗಿ

ವಿಜ್ಞಾನದ ರೆಕ್ಕೆ ಏರಿ ಹಾರಿಸಿದರು
ಪ್ರೋಖ್ರಾನ ಪತಾಕೆ ಮುಗಿಲೆತ್ತರಕೆ

ರಾಷ್ಟ್ರಪತಿಯಾಗಿ ಮೆರೆದರು ಸರಳತೆಯ ಸಾಕಾರವಾಗಿ

ಮಕ್ಕಳಿಗೆ ಒಲುಮೆಯ ಬೋಧಕನಾಗಿ
ಯುವ ವಿಜ್ಞಾನಿಗಳಿಗೆ ಬೆನ್ನುತಟ್ಟುವ
ಗೆಳೆಯನಾಗಿ
ದೇಶಕೊರೆವ ಹುಳುಗಳಿಗೆ
ನೆಗ್ಗಲಮುಳ್ಳಾಗಿ
ದೇಶಭಕ್ತರಿಗೆ ದಾರಿ ದೀಪವಾಗಿ
ಸಜ್ಜನರಿಗೆ ಸಾಕಾರ ಪ್ರಜ್ಞೆಯಾಗಿ
ಇರುವನೀ ಮಹಾತ್ಮ ಚಿರಕಾಲ ನಮ್ಮ ಮನದಲ್ಲಿ

ಒಮ್ಮೆ ನೋಡಿ ಮಾತನಾಡಿದ ಸವಿ ನೆನಪಿಗಿಂದು ವಿಷಾದದ ಛಾಯೆ

ಹೇಳಬೇಕಿದೆ ಇನ್ನಷ್ಟು ಮತ್ತಷ್ಟು
ಗಂಟಲುಬ್ಬಿ ಬರುತಿದೆ ಇಂದು
ಸಾಟಿಯಿಲ್ಲದ ಮಹಾತ್ಮನಿಗೆ
ಇದೋ ನಮ್ಮ ಸಲಾಮ್

Tuesday, 21 July 2015

ಚಾಂದ್ರ ದಿನ ಆಚರಣೆ

          1969 ಜುಲೈ 21 ರಂದು ಮೊತ್ತ ಮೊದಲ ಬಾರಿಗೆ ಗಗನ ಯಾತ್ರಿಗಳಾದ ನೀಲ್ ಆರ್ಮ್ಸ್'ಸ್ಟ್ರಾಂಗ್, ಎಡ್ವಿನ್ ಆಲ್ಡ್ರಿನ್ ಹಾಗೂ ಮೈಕಲ್ ಕೊಲಿನ್ಸ್ ರವರು ಚಂದ್ರನಲ್ಲಿ ಕಾಲಿರಿಸಿದ ಸವಿನೆನಪಿಗೆ ಇಂದಿನ ದಿನವನ್ನು ಚಾಂದ್ರ ದಿನವಾಗಿ ಶಾಲೆಯಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ಚಿತ್ರ ಪ್ರದರ್ಶನ ಹಾಗೂ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ಅಧ್ಯಾಪಕ ಜಯಪ್ರಶಾಂತ್. ಪಿ ರವರು ಚಾಂದ್ರ ದಿನದ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ನಿಶ್ಮಿತಾ ಪ್ರಥಮ, ಕೀರ್ತನ್ ಹಾಗೂ ಮಾನಸ ದ್ವಿತೀಯ ಸ್ಥಾನವನ್ನು ಗಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಬಹುಮಾನ ವಿತರಿಸಿದರು.









Thursday, 16 July 2015

ಶಾಲಾ ಚುನಾವಣೆ 2015-16

            2015-16ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ಬಹಳ ಉತ್ಸಾಹದಿಂದ ಜರಗಿತು. ಮಕ್ಕಳು ಸರದಿ ಸಾಲಿನಲ್ಲಿ ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗೆ ಗೌಪ್ಯ ಮತದಾನದ ಮೂಲಕ ಶಾಲಾ ನಾಯಕನನ್ನು ಆಯ್ಕೆ ಮಾಡಿದರು. ಮಕ್ಕಳು ಮತದಾನದ ಗುರುತಾಗಿ ಕೈ ಬೆರಳಿಗೆ ಶಾಯಿ ಹಾಕಿಸಿಕೊಂಡು, ನೆಚ್ಚಿನ ಅಭ್ಯರ್ಥಿಯ ಚುನಾವಣಾ ಗುರುತಿಗೆ ಓಟು ಒತ್ತಿ, ಅದನ್ನು ಮತದಾನ ಪೆಟ್ಟಿಗೆಗೆ ಹಾಕುತ್ತಾ ಪ್ರಜಾಪ್ರಭುತ್ವದ ಅನುಭವವನ್ನು ಪಡೆದು ಸಂಭ್ರಮಿಸಿದರು. ಮತದಾನದ ಬಳಿಕ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯವರ ನೇತೃತ್ವದಲ್ಲಿ ಮತ ಎಣಿಕೆ ನಡೆಸಲಾಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜೇತ ಅಭ್ಯರ್ಥಿಯ ಬೆಂಬಲಿಗರ ಜಯಘೋಷ ಮುಗಿಲು ಮುಟ್ಟಿತ್ತು. ಕುಮಾರಿ ನಿಹಾ ಫಾತಿಮಾ ತನ್ನ ಹತ್ತಿರದ ಪ್ರತಿಸ್ಪರ್ಧಿ ಕೀರ್ತನ್'ನನ್ನು 15 ಮತಗಳ ಅಂತರದಿಂದ ಸೋಲಿಸುವ ಮೂಲಕ ಶಾಲಾ ನಾಯಕಿಯ ಪಟ್ಟವನ್ನಲಂಕರಿಸಿದಳು. ವಿದ್ಯಾರ್ಥಿ ಕೀರ್ತನ್ ಉಪನಾಯಕನಾಗಿ ಆಯ್ಕೆಯಾದನು. ವಿಜೇತ ಅಭ್ಯರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರು ಅಭಿನಂದಿಸಿ, ಬಳಿಕ ಪ್ರಮಾಣ ವಚನವನ್ನು ಬೋಧಿಸಿದರು.












Wednesday, 15 July 2015

ಶಾಲಾ ಚುನಾವಣೆಗೆ 2015-16 ನಾಮ ಪತ್ರ ಸಲ್ಲಿಕೆ

            2015-16 ನೇ ಸಾಲಿನ ಶಾಲಾ ಚುನಾವಣೆಗೆ ಅಭ್ಯರ್ಥಿಗಳಿಂದ ತಮ್ಮ ಬೆಂಬಲಿಗರೊಂದಿಗೆ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರಿಗೆ ನಾಮಪತ್ರ ಸಲ್ಲಿಕೆ...