....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

ABOUT US

ನಡೆದು ಬಂದ ದಾರಿ...

    ಕಳೆದ ಅರುವತ್ತು ವರ್ಷಗಳಲ್ಲಿ ಬೋವಿ ಸಮಾಜದಲ್ಲಿ ತುಂಬಾ ಬದಲಾವಣೆಗಳಾಗಿವೆ. ಬದಲಾವಣೆಗಳು ಪ್ರಕೃತಿಯ ನಿಯಮ ನಿಜ; ಆದರೆ ನಮ್ಮವರ ಜೀವನದಲ್ಲಿ ಆಗಿರುವಷ್ಟು ಗಣತರ ಬದಲಾವಣೆಗಳು ಇತರ ಯಾವ ಸಮಾಜದಲ್ಲೂ ಆಗಿರಲಿಕ್ಕಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ನೆರೆಯ ಊರುಗಳಾದ ಉಚ್ಚಿಲ, ಉಪ್ಪಳದ ನಮ್ಮ ಜನರಲ್ಲೂ ತುಂಬಾ ಬದಲಾವಣೆಗಳಾಗಿವೆ.
    ಮೀನು ಹಿಡಿಯುವುದನ್ನು ಮುಖ್ಯ ಕಸುಬನ್ನಾಗಿ ಹಮ್ಮಿಕೊಂಡಿದ್ದ ನಮ್ಮ ಊರಿನವರು 1900 ರಿಂದ ಈಚೆಗೆ ಉದ್ಯೋಗವನ್ನು ಅರಸಿಕೊಂಡು ಮುಂಬೈಯಂತಹ ನಗರಗಳಿಗೆ ಹೋಗಲು ಆರಂಭಿಸಿದರು. ರೈಲು ಮತ್ತು ರಸ್ತೆ ಸಾರಿಗೆ ಅಭಿವೃದ್ಧಿಗೊಂಡಂತೆ, ಮುಂಬೈಗೆ ಹೋಗುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಹಾಗೆ ಹೋದ ನಮ್ಮವರು ಹಗಲು ಆಫೀಸು, ಬಂಗ್ಲೆಗಳಲ್ಲಿ ಕೆಲಸ ಮಾಡಿ ರಾತ್ರಿ ಶಾಲೆಗೆ (Night school) ಹೋಗಿ ಕಲಿತರು. 'ಪ್ರಗತಿಗೆ ಪ್ರೇರಣೆ ಶಿಕ್ಷಣ' ಎಂಬ ಸತ್ಯಾಂಶವನ್ನು ಅರಿತ  ಮುಂಬೈಯಲ್ಲಿದ್ದ ಬೋವಿ ತರುಣರು, ನೆರೆ ಹಳ್ಳಿಗಳಾದ ಉಚ್ಚಿಲ ಮತ್ತು ಐಲದಲ್ಲಿ ಇದಾಗಲೆ ತೆರೆದಿರುವ ಶಾಲೆಗಳ ಮಹತ್ವವನ್ನು ಅರಿತು, ನಮ್ಮ ಊರಲ್ಲೂ ಒಂದು ಶಾಲೆಯನ್ನು ಪ್ರಾರಂಭಿಸಬೇಕೆಂಬ ಮುಖ್ಯ ಉದ್ದೇಶದಿಂದ 'ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ' ವನ್ನು 07-11-1948 ರಲ್ಲಿ ಸ್ಥಾಪಿಸಿದರು.
    ಊರಿನಲ್ಲಿ ಅಧಿಕಾಂಶ ಬೋವಿ ಜನರು ತಮ್ಮ ವೃತ್ತಿಗೆ (ಸಮುದ್ರಕ್ಕೆ ಹೋಗಿ ಮೀನು ಹಿಡಿಯುವುದು) ಅನುಕೂಲವಾಗುವಂತೆ ಸಮುದ್ರ ಕರಾವಳಿಯಲ್ಲಿ ನೆಲೆಸಿದ್ದರು. 1951 ಕ್ಕೆ ಮೊದಲು ಪ್ರಾಥಮಿಕ ಶಿಕ್ಷಣವನ್ನು ಕೊಡುವ ಬೋರ್ಡ್ ಶಾಲೆಗಳು (ಸರಕಾರಿ ಶಾಲೆ) ಕುಚ್ಚಿಕ್ಕಾಡು ಮತ್ತು ಕುಂಜತ್ತೂರುಗಳಲ್ಲಿದ್ದವು. ಈ ಎರಡೂ ಶಾಲೆಗಳು ಕರಾವಳಿ ಪ್ರದೇಶದಿಂದ ಸುಮಾರು ಒಂದರಿಂದ ಒಂದೂವರೆ ಕಿಲೋ ಮೀಟರ್ ಗಳಷ್ಟು ದೂರದಲ್ಲಿದ್ದು ಶಾಲೆಗೆ ಹೋಗುವ ಮಕ್ಕಳು ರೈಲ್ವೇ ಲೈನು ದಾಟಿಕೊಂಡು ಹೋಗಬೇಕು. ಮಳೆಗಾಲದಲ್ಲಿ ತೋಡುಗಳನ್ನು ದಾಟಿಕೊಂಡು ಹೋಗಬೇಕಿತ್ತು. ಕುಚ್ಚಿಕ್ಕಾಡು ಶಾಲೆಯು ನಿರ್ಜನ ಗುಡ್ಡಕಾಡು ಪ್ರದೇಶದಲ್ಲಿತ್ತು. ಈ ಕಾರಣಗಳಿಂದಾಗಿ ಹೆಚ್ಚಿನ ಮಕ್ಕಳು ಶಾಲೆಗೆ ಹೋಗದೆ ಅವಿದ್ಯಾವಂತರಾಗಿ ಉಳಿದರು. ಆಗಿನ ಪರಿಸ್ಥಿತಿಯನ್ನು ಅರ್ಥಮಾಡಿದ ಊರಿನ ವಿದ್ಯಾಭಿಮಾನಿಗಳು ಹಾಗೂ ಮುಂಬೈಯಲ್ಲಿನ ನಮ್ಮೂರವರು ಮುಖ್ಯವಾಗಿ ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ'ದ ಸದಸ್ಯರು ನಮ್ಮ ಊರಲ್ಲೇ ಒಂದು ಪ್ರಾಥಮಿಕ ಶಾಲೆಯಿದ್ದರೆ ವಿದ್ಯೆಯಿಂದ ವಂಚಿತರಾಗುವ ನಮ್ಮ ಮಕ್ಕಳು, ಮೊಮ್ಮಕ್ಕಳು ತಮ್ಮ ಮನೆಯ ಪಕ್ಕದಲ್ಲೇ ವಿದ್ಯಾಭ್ಯಾಸವನ್ನು ಪಡೆಯಬಹುದೆಂದು ಶಾಲೆಯೊಂದನ್ನು ಸ್ಥಾಪಿಸುವಲ್ಲಿ ಕಾರ್ಯಪ್ರವೃತ್ತರಾದರು. ಊರಿನಲ್ಲಿ 1951 ರ ಸುಮಾರಿಗೆ ದಿ| ಬೀಚ ಬೆಳ್ಚಪ್ಪಾಡರು ಮನೆ ಮನೆಗೆ ಹೋಗಿ ಮಕ್ಕಳಿಗೆ ಅಕ್ಷರ ಜ್ಞಾನವನ್ನು ಭೋದಿಸುತ್ತಿದ್ದರು, ಹಾಗೂ ವಿದ್ಯೆಯ ಮಹತ್ವವನ್ನು ಜನರು ತಿಳಿಯುವಂತೆ ಮಾಡಿದರು. ದಿವಂಗತ ಬೀಚ ಬೆಳ್ಚಪ್ಪಾಡರ ಸುಪುತ್ರರಾದ ದಿ| ಬಾಲಕೃಷ್ಣ ಮಾಸ್ತರರು ಸಮುದ್ರ ಕರಾವಳಿಯಲ್ಲಿ ಕೊಳಕೆ ಕರಿಯಪ್ಪನವರ ದೋಣಿಯಿಡುವ ಚಾಪೆಯಲ್ಲಿ ಮಕ್ಕಳಿಗೆ ಹೊೈಗೆಯಲ್ಲಿ ಬರೆದು  ಅಕ್ಷರ ಅಭ್ಯಾಸವನ್ನು ನೀಡುತ್ತಿದ್ದರು. ಮುಂಬೈಯಲ್ಲಿ ದಿ|  ಉದ್ಯಾವರ ಐತಪ್ಪನವರ ನೇತೃತ್ವದಲ್ಲಿ ನಮ್ಮ ತರುಣರು ಕನ್ನಡ ನಾಟಕ (ಸಂಸಾರ ನೌಕೆ) ಹಾಗೂ ಯಕ್ಷಗಾನ ಬಯಲಾಟ (ದೇವಿ ಮಹಾತ್ಮೆ) ಗಳನ್ನು ಸಂಯೋಜಿಸಿ  ಶಾಲೆಯ ಕಟ್ಟಡ ಕಟ್ಟಿಸಲು ಬೇಕಾಗುವ ನಿಧಿ ಸಂಗ್ರಹಣೆಯಲ್ಲಿ ಯಶಸ್ವಿಯಾಗಿ 1950 ರಲ್ಲಿ ಶಾಲೆಗೆ ಬೇಕಾಗುವ ಕಟ್ಟಡ ನಿರ್ಮಾಣವಾಯಿತು. ಅದರೊಂದಿಗೆ ನಮ್ಮ ಎಲ್ಲಾ  ವಿದ್ಯಾಭಿಮಾನಿಗಳ ನಿರಂತರ ಪ್ರಯತ್ನದಿಂದಾಗಿ ಒಂದರಿಂದ ಮೂರನೇ ತರಗತಿ ವರೆಗೆ ಆರಂಭಿಸಲು ಜಿಲ್ಲಾ ವಿದ್ಯಾಧಿಕಾರಿ, ದಕ್ಷಿಣ ಕನ್ನಡ ಇವರ ತಾತ್ಕಾಲಿಕ (Temporary) ಪರವಾನಿಗೆ ದೊರೆಯಿತು. ಅದೇ ಪ್ರಕಾರ ತಾ. 30-03-1951 ರಲ್ಲಿ 'ಶ್ರೀ ಭಗವತೀ ಟೆಂಪಲ್ ಎಲಿಮೆಂಟರಿ ಶಾಲೆ'ಯು ಆಗಲೇ ಕಟ್ಟಿದ ಹೊಸ ಕಟ್ಟಡದಲ್ಲಿ ಪ್ರಾರಂಭವಾಯಿತು. ದಿ| ಕೆ. ಚನಿಯಪ್ಪ, ದಿ| ಯು. ಗುಡ್ಡಪ್ಪ ಹಾಗೂ  ದಿ| ಯು. ಬಾಲಕೃಷ್ಣ ಈ ಮೂವರು ಅಧ್ಯಾಪಕರಿಂದ ಶಾಲೆಯು ಪ್ರಾರಂಭಗೊಂಡಿತು. ಪ್ರಾರಂಭದಲ್ಲಿ ಶಾಲೆಯು ಹಲವು ಅಡ್ಡಿ ಅಡಚಣೆಗಳನ್ನು ಎದುರಿಸಬೇಕಾಯಿತು. ಆದರೂ ಆಗಿನ ಕರೆಸ್ಪೋಂಡೆಂಟ್ ಆಗಿದ್ದ ದಿ| ಬಾಲಕೃಷ್ಣ ಮಾಸ್ತರರು ಮತ್ತು ಊರ ಪರವೂರ  ವಿದ್ಯಾಭಿಮಾನಿಗಳ ಸತತ ಪರಿಶ್ರಮದಿಂದ 1953 ರಲ್ಲಿ ಜಿಲ್ಲಾ ವಿದ್ಯಾಧಿಕಾರಿ ದಕ್ಷಿಣ ಕನ್ನಡ, ಇವರಿಂದ ಖಾಯಂ ಮಂಜೂರಾತಿ ಪಡೆದು ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಪೂರ್ಣ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿತು. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯು 109 ಇದ್ದು ಅಧ್ಯಾಪಕರ ಸಂಖ್ಯೆಯು ಮೂರು ಇತ್ತು. ಆ ತನಕ ಶಾಲೆಯ ಹೆಸರು ಉದ್ಯಾವರ ಟೆಂಪಲ್ ಎಲಿಮೆಂಟರಿ ಶಾಲೆ ಇದ್ದುದು ಜನವರಿ 1953 ರಲ್ಲಿ  ಉದ್ಯಾವರ ಭಗವತೀ ಎಲಿಮೆಂಟರಿ ಶಾಲೆಯಾಯಿತು. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ರಚಿಸಲ್ಪಟ್ಟಿತು. ನಮ್ಮ ಈ ಪ್ರದೇಶವೂ ಕೇರಳ ಪ್ರಾಂತ್ಯದಲ್ಲಿ ಸೇರಲ್ಪಟ್ಟಿತು. ಸಪ್ಟಂಬರ್ 1957 ರಲ್ಲಿ ಶಾಲೆಯು ಉದ್ಯಾವರ ಭಗವತೀ ಕಿರಿಯ ಪ್ರಾಥಮಿಕ ಶಾಲೆಯೆಂದು ಕರೆಯಲ್ಪಟ್ಟಿತು. ಸಪ್ಟಂಬರ್ 1960 ಉದ್ಯಾವರ ಭಗವತೀ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯೆಂದು ಕರೆಯಲ್ಪಟ್ಟಿತು. ಮುಂದೆ 1962 ರಲ್ಲಿ ಕೇರಳ ಸರಕಾರದ ವಿದ್ಯಾಧೋರಣೆ ಪ್ರಕಾರ ಐದನೇ ತರಗತಿಯು ರದ್ದುಗೊಳಿಸಲ್ಪಟ್ಟಿತು. ಸರಕಾರದ ವಿದ್ಯಾಧೋರಣೆಗೆ ಅನುಸಾರವಾಗಿ ಮುಸ್ಲಿಂ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅರಬಿಕ್ ಭಾಷೆಯನ್ನು ಕೂಡಾ ಕಲಿಸಲಾಗುತ್ತಿದೆ. ಅರಬಿಕ್ ಭಾಷೆಯನ್ನು ಕಲಿಸಲು ಸರಕಾರವು  ಅಧ್ಯಾಪಕರೊಬ್ಬರನ್ನು ನೇಮಿಸಿರುವುದು. ಮಲೆಯಾಳ ಭಾಷೆ ಕಲಿಯಲು ಇಚ್ಚಿಸುವ ಮಕ್ಕಳಿಗೆ ಮಲೆಯಾಳವನ್ನೂ ಕಲಿಸುವ ವ್ಯವಸ್ಥೆಯೂ ಈ ಶಾಲೆಯಲ್ಲಿದೆ.
    1981-82 ರಲ್ಲಿ ಸ್ಥಳದ ಅಭಾವವನ್ನು ನೀಗಿಸಲು ಹಾಗೂ ಶಾಲೆಯ ಮುಂದಿನ ಅಭಿವೃದ್ಧಿಗೋಸ್ಕರ  ಊರಿನ ಹಾಗೂ  ಮುಂಬೈಯ  ವಿದ್ಯಾಭಿಮಾನಿಗಳ ಉದಾರ ಧನ ಸಹಾಯದಿಂದ 'ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಮುಂಬೈ' ಇದರ ರಜತ ಮಹೋತ್ಸವ (Silver jubilee) ದ ನೆನಪಿನ ಕಾಣಿಕೆಯಾಗಿ ಶಾಲಾ ಕಟ್ಟಡದ ಬಲ ಭಾಗದಲ್ಲಿ ಇನ್ನೊಂದು ಕಟ್ಟಡ (Annexe) ವು ನಿರ್ಮಿಸಲ್ಪಟ್ಟಿತು.
    ಎಲ್ಲಾ ಮತದವರಿಗೆ ಬೇಧ ಭಾವವಿಲ್ಲದೆ ವಿದ್ಯಾರ್ಜನೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ಶಾಲೆಯ ಆಡಳಿತವನ್ನು  ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘವು ನೋಡಿಕೊಳ್ಳುತ್ತಾ ಇದೆ. ಹಲವು ವರ್ಷಗಳಿಂದ ಶಾಲೆಯ ಎಲ್ಲಾ ತರಗತಿಯ ಮಕ್ಕಳಿಗೂ ಪುಸ್ತಕ, ಲೇಖನ ಸಾಮಾಗ್ರಿಗಳು ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ಸಂಘವು ಒದಗಿಸುತ್ತಾ ಇದೆ.
    ಒಂದು ವಿದ್ಯಾ ಸಂಸ್ಥೆಯ/ಶಾಲೆಯ ಅಭಿವೃದ್ಧಿಯಲ್ಲಿ ಅಲ್ಲಿನ ಮುಖ್ಯೋಪಾಧ್ಯಾಯ/ ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ- ಅಧ್ಯಾಪಿಕೆಯರು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ನಮ್ಮ ಶಾಲೆಯಲ್ಲಿ ದಿ| ಗುಡ್ಡಪ್ಪ ಮಾಸ್ತರರು (01-05-1951 ರಿಂದ 07-02-1972), ದಿ| ಚನಿಯಪ್ಪ ಮಾಸ್ತರರು (30-03-1951 ರಿಂದ 30-03-1970), ದಿ| ಶ್ರೀಪತಿ ಭರ್ವತ್ತಾಯ ಮಾಸ್ತರರು (20-10-1956 ರಿಂದ 31-03-1989),  ಶ್ರೀಮತಿ ಕುಸುಮ ಟೀಚರರು (28-06-1972 ರಿಂದ 31-03-2004), ಶ್ರೀಮತಿ ನಿರ್ಮಲ ಟೀಚರರು (03-01-1979 ರಿಂದ 31-03-2011) ಮೊದಲು ಅಧ್ಯಾಪಕ/ ಅಧ್ಯಾಪಿಕೆಯರಾಗಿ ಅನಂತರ ಶಾಲೆಯ ಮುಖ್ಯೋಪಾಧ್ಯಾಯ/ ಮುಖ್ಯೋಪಾಧ್ಯಾಯಿನಿಯರಾಗಿ  ಶಾಲೆಯ ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರವನ್ನು ವಹಿಸಿರುವರು. ತಾ. 31-03-2011 ರಿಂದ  ಶ್ರೀಮತಿ ಜಲಜಾಕ್ಷಿ ಟೀಚರರು  ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ  ಶಾಲೆಯ ಚುಕ್ಕಾಣಿಯನ್ನು ಹಿಡಿದಿರುವರು. ಅದೇ ರೀತಿಯಾಗಿ ದಿ| ಬಾಲಕೃಷ್ಣ ಮಾಸ್ತರರು (30-03-1951 ರಿಂದ 31-07-1951), ದಿ| ಸರಸ್ವತಿ ಟೀಚರರು (01-08-1951 ರಿಂದ 23-09-1971), ದಿ| ಲೀಲಾವತಿ ಟೀಚರರು (01-11-1954 ರಿಂದ 30-03-1983), ಶ್ರೀಮತಿ ವಸಂತಿ ಟೀಚರರು (01-12-1971 ರಿಂದ 30-09-1977), ಶ್ರೀಮತಿ ದಯಾ ಟೀಚರರು (01-06-1982 ರಿಂದ 27-01-1987), ಶ್ರೀಮತಿ ಯಶೋಧ ಕೆ ಟೀಚರರು (04-01-1977 ರಿಂದ ಫೆಬ್ರವರಿ 1987), ಶ್ರೀಮತಿ ನಳಿನಿ ಟೀಚರರು (01-06-1989 ರಿಂದ 31-03-2011), ಶ್ರೀಮತಿ ದಯಾವತಿ ಟೀಚರರು (01-08-1977 ರಿಂದ 22-10-2008), ಮೊಹಮ್ಮದ್ ಶರೀಫ್ (27-01-1992 ರಿಂದ 25-07-1984), ಕೆ.ಎ ಅಬ್ದುಲ್ ರಶೀದ್ (26-07-1994 ರಿಂದ 30-09-1999) ರ ವರೆಗೆ ತಮ್ಮ ಸೇವೆಯನ್ನು ಶಾಲೆಗೆ ಸಲ್ಲಿಸಿರುವರು. ಪ್ರಸ್ತುತ ಅಬ್ದುಲ್ ಮಜೀದ್, ಶ್ರೀ ಜಯಪ್ರಶಾಂತ್ ಪಿ, ಕುಮಾರಿ ಭವ್ಯಶ್ರೀ ಯನ್, ಶ್ರೀಮತಿ ಗೀತಾ ಎ ರವರು ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಟೀಚರರ ನೇತೃತ್ವದಲ್ಲಿ ಶಾಲೆಯ ಪ್ರಗತಿಗೆ ಸರ್ವ ಪ್ರಯತ್ನವನ್ನು ಮಾಡುತ್ತಿರುವರು. ಶಲೆಯ ಅಧ್ಯಾಪಕ ವೃಂದದೊಂದಿಗೆ ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ,  ಉದ್ಯಾವರ ಹಾಗೂ   ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಮುಂಬೈ ಇವೆರಡು ಸಂಸ್ಥೆಗಳು ಎಲ್ಲಾ ರೀತಿಯಿಂದಲೂ ಸಹಕರಿಸುತ್ತಾ ಬಂದಿದೆ. ಸಂಘದ ವತಿಯಿಂದ ಕರೆಸ್ಪೋಂಡೆಂಟ್ಸ್ ಹಾಗೂ ಮ್ಯಾನೇಜರ್ ಗಳೂ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಹಾಗೂ ನಿರ್ವಹಣೆ (Maintenance) ಯಲ್ಲಿ ಭಾಗಿಗಳಾಗಿ ಶಾಲೆಯು ಯಾವೊಂದು ತೊಂದರೆಗಳಿಲ್ಲದೆ ಸುಗಮವಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವರು. ಶಾಲೆಯ ಪ್ರಥಮ   ಕರೆಸ್ಪೋಂಡೆಂಟ್ ದಿ| ಬಾಲಕೃಷ್ಣ ಮಾಸ್ತರರು ಶಾಲೆಯ ಸ್ಥಾಪನೆ ಹಾಗೂ ಮುಂದೆ ಖಾಯಂ ಮಂಜೂರಾತಿಯನ್ನು ಪಡೆಯಲು ರಾತ್ರಿ ಹಗಲು ದುಡಿದಿರುವರು. ಅನಂತರ ದಿ| ಸೋಮಪ್ಪ ಕೆ (1950-1972), ದಿ| ಜಯಂತ ಉದ್ಯಾವರ (1972-1975), ಶ್ರೀ ಮೋಹನ ಎನ್ ಉದ್ಯಾವರ (1975-1978), ಶ್ರೀ ಪದ್ಮನಾಭ ಕೆ (1980-1982), ದಿ| ನಾರಾಯಣ ಎಮ್ ಉದ್ಯಾವರ (1982-1992), ಶ್ರೀ ಭಾಸ್ಕರ ಕೊಳಕೆ (1992-1997), ಶ್ರೀ ರಘುನಾಥ ಉದ್ಯಾವರ (1997-2002), ಶ್ರೀ ವಿಶ್ವನಾಥ ಉದ್ಯಾವರ (2002-2007), ಶ್ರೀ ರಾಜೇಂದ್ರ ಯಸ್ ಉದ್ಯಾವರ (2007-2009) ಶಾಲೆಯ ಕರೆಸ್ಪೋಂಡೆಂಟ್ ಹಾಗೂ ಮ್ಯಾನೇಜರ್ ಗಳಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು. ತಾರೀಕು 01-07-2009 ರಿಂದ ಶ್ರೀ ಕೃಷ್ಣಪ್ಪ ಬೆಂಗರೆಯವರು ಶಾಲೆಯ ಮ್ಯಾನೇಜರ್ ರಾಗಿ ಕಾರ್ಯ ನಿರ್ವಹಿಸುತ್ತಿರುವರು.
    2011 ಮಾರ್ಚ್ 30 ಕ್ಕೆ ನಮ್ಮ ಶಾಲೆಗೆ 60 ವರ್ಷ ತುಂಬಿರುತ್ತದೆ. ಈ ಅರುವತ್ತು ವರ್ಷಗಳಲ್ಲಿ ಸುಮಾರು 2500 ಕ್ಕಿಂತಲೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳಲ್ಲಿ ಹಲವಾರು ಮಂದಿ ದೇಶ, ವಿದೇಶಗಳಲ್ಲಿ ಉತ್ತಮ ಹುದ್ದೆಗಳಲ್ಲಿರುವರಲ್ಲದೆ ಹಲವಾರು ಸ್ವಂತ ಉದ್ಯಮಗಳನ್ನು ನಡೆಸುತ್ತಿರುವರು. ಇತ್ತೀಚಿನ ಕೆಲವು ವರ್ಷಗಳಿಂದ ಹೆತ್ತವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗೆ ಕಳುಹಿಸುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳ ಸರ್ವೇ ಸಾಮಾನ್ಯ ಸಮಸ್ಯೆಯಾಗಿದ್ದು ನಮ್ಮ ಶಾಲೆಯು ಇದಕ್ಕೆ ಹೊರತಾಗಿಲ್ಲ. ಆದರೂ ಶಾಲೆಯ ಅಧ್ಯಾಪಕ ವೃಂದ ಹಾಗೂ ಆಡಳಿತ ಸಂಘವು ಪ್ರತಿ ವರ್ಷ ಆದಷ್ಟು ಹೆಚ್ಚು ಮಕ್ಕಳನ್ನು ಶಾಲೆಗೆ ಬರುವಂತೆ ಪ್ರಯತ್ನ ಪಡುತ್ತಿದೆ.
    ನಮ್ಮ ಈ ಶಾಲೆಯ ಆರು ದಶಕಗಳ ಇತಿಹಾಸದಲ್ಲಿ ಸಾಧಿಸಿದ ಪ್ರಗತಿಯಲ್ಲಿ ಇದನ್ನು ನಡೆಸಿಕೊಂಡು ಬಂದ  ವಿದ್ಯಾದಾಯಿನಿ ಸಂಘ ಹಾಗೂ ಶಾಲಾ  ಅಧ್ಯಾಪಕ ವೃಂದದವರದೇ ಮೇಲುಗೈ ಎಂದರೆ ತಪ್ಪಾದೀತು. ಏಕೆಂದರೆ, ಶಾಲೆ ಬರೇ ಒಂದು ಜಾತಿಗಲ್ಲ. ಅದರ ಸೌಲಭ್ಯ ಎಲ್ಲಾ ಜಾತಿ ಮತದವರಿಗೂ ಸಮಾನವಾಗಿ ದೊರೆಯಬೇಕಾದದ್ದು. ಹಾಗೆಯೇ ನಮ್ಮ ಶಾಲೆಯು ಎಲ್ಲಾ ಜಾತಿ, ಮತ, ಧರ್ಮದವರಿಗೂ ಯಾವುದೇ ಬೇಧ ಭಾವವಿಲ್ಲದೆ ಒಂದೇ ಸಮಾನವಾಗಿ ವಿದ್ಯಾದಾನ ನೀಡುತ್ತಿದೆ. ನಮ್ಮ ಈ ಶಾಲೆಯು ಕಣ್ವತೀರ್ಥ, ಕುಂಜತ್ತೂರಿನ ಆಸುಪಾಸು ಮಕ್ಕಳಿಗೆ ಒಂದು ಜ್ಞಾನ ದೀವಿಗೆಯಾಗಿದೆ ಎಂದರೆ ತಪ್ಪಾಗಲಾರದು.
    ವಜ್ರ ಮಹೋತ್ಸವವನ್ನು ಆಚರಿಸಿದ ನಮ್ಮ ಶಾಲೆಯ ಎಲ್ಲಾ ಏಳುಬೀಳುಗಳಿಗೂ ಕಾರಣಕರ್ತರುಗಳಾದ ಬೋವಿ ಸಮಾಜದ ಬಾಂಧವರಿಗೂ, ಆಸುಪಾಸಿನ ಇತರ ಜಾತಿ, ಮತ, ಧರ್ಮದವರಿಗೂ ತಮ್ಮ ಜೀವನದ ಬೆಳಕನ್ನು ಈ ಶಾಲೆಯ ಮೂಲಕ ಬೆಳಗಿಸಿಕೊಂಡು ಭವಿಷ್ಯ ಜೀವನದ ನಾನಾ ಕ್ಷೇತ್ರಗಳಲ್ಲಿ, ದೇಶ ವಿದೇಶಗಳಲ್ಲಿ ಕೀರ್ತಿವಂತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ, ಕಾಲ ಕಾಲಕ್ಕೆ ಕೇವಲ ಸೇವಾ ಭಾವದಿಂದ ಬಹುಮುಖ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕವಾಗಿ ಧನ್ಯವಾದವನ್ನು ಸಲ್ಲಿಸುತ್ತೇವೆ. ಶಾಲೆಯು ಮುಂದೆ ಶತಮಹೋತ್ಸವವನ್ನು ಆಚರಿಸಿ, ನೂರಾರು ವರ್ಷಗಳು ಹೀಗೆಯೇ ಕತ್ತಲಿನಿಂದ ಬೆಳಕಿನೆಡೆಗೆ ಈ ವಿದ್ಯಾಮಂದಿರವು ಮುನ್ನಡೆಯುವಂತೆ ಎಲ್ಲರ ಹಾರ್ದಿಕ ಶುಭಾಶಂಸನೆ ನಮ್ಮೀ ಶಾಲೆಯ ಮೇಲಿರಲಿ ಎಂದು ಅಪೇಕ್ಷಿಸುತ್ತೇವೆ.
“ತಮಸೋಮಾ ಜ್ಯೋತಿರ್ಗಮಯ”

ಶಾಲಾ ಸಂಕೀರ್ಣ (ಅಂದು-ಇಂದು)






ನಮ್ಮನ್ನಗಲಿದ ಪೂಜ್ಯ ಗುರುವೃಂದ
 






ಶಾಲೆಯ ಸ್ಥಾಪಕರು 






ಶಾಲೆಯ ಮೊದಲ ಕರೆಸ್ಪೋಂಡೆಂಟ್ಸ್ (ಪ್ರಬಂಧಕರು)







No comments:

Post a Comment