....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday 31 July 2014

ಚಾಂದ್ರ ದಿನಾಚರಣೆ


           ತಾ. 21-07-2014 ನೇ ಸೋಮವಾರದಂದು ಚಾಂದ್ರ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಚಾಂದ್ರ ಯಾನದ ಸಿ.ಡಿ ಹಾಗು ಚಿತ್ರ ಪ್ರದರ್ಶನವನ್ನು ನಡೆಸಲಾಯಿತು. ಬಳಿಕ ಮಕ್ಕಳಿಗೆ ರಸಪ್ರಶ್ನೆಯನ್ನು ಶಾಲಾ ಅಧ್ಯಾಪಿಕೆಯಾದ ಶ್ರೀಮತಿ ಗೀತಾ ಎ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಾದ ದೀರಜ್ ಆರ್ ಹಾಗೂ ಆಯಿಶತ್ ಸಫ್ನರಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ಚಾಂದ್ರ ದಿನದ ಮಹತ್ವ ಹಾಗೂ ವಿಶೇಷತೆಯನ್ನು ತಿಳಿಸಿ, ನಂತರ ಮಕ್ಕಳ ಕಣ್ಣು ಮುಚ್ಚಿಸಿ ಅವರ ಮನಸನ್ನು ಚಂದ್ರ ಲೋಕಕ್ಕೆ ಕೊಂಡೊಯ್ಯುವ ವಿಶೇಷ ಚಟುವಟಿಕೆಯನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ಅಬ್ದುಲ್ ಖಾದರ್ ನಾದಿಮ್ ಗಗನ ಯಾತ್ರಿಯ ವೇಷ ಧರಿಸಿ ವೇದಿಕೆಗೆ ಬಂದು ಚಾಂದ್ರ ಯಾನವನ್ನು ಅನುಕರಿಸಿದ್ದು ಎಲ್ಲರ ಗಮನ ಸೆಳೆಯಿತು.





ಚುನಾವಣೆಯ ಮೂಲಕ ಶಾಲಾ ನಾಯಕನ ಆಯ್ಕೆ


        ತಾ. 17-07-2014 ನೇ ಗುರುವಾರದಂದು ಶಾಲಾ ನಾಯಕನ ಆಯ್ಕೆಯನ್ನು ಚುನಾವಣೆಯ ಮೂಲಕ ಮಾಡಲಾಯಿತು. ಚುನಾವಣೆಯ ಹಿಂದಿನ ದಿನ ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರು ಅಭ್ಯರ್ಥಿಗಳ ನಾಮ ಪತ್ರವನ್ನು ಸ್ವೀಕರಿಸಿದರು. ಮರುದಿನ ನಡೆದ ಚುನಾವಣೆಯಲ್ಲಿ ಸರದಿ ಸಾಲಿನಲ್ಲಿ ನಿಂತ ಶಾಲಾ ವಿದ್ಯಾರ್ಥಿಗಳು ಚುನಾವಣಾ ಗುರುತನ್ನು ತಮ್ಮ ಬೆರಳಿಗೆ ಹಾಕಿಸಿಕೊಂಡು ಗೌಪ್ಯ ಮತದಾನದ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತವನ್ನು ಹಾಕಿದರು. ಚುನಾವಣೆಯ ಎಲ್ಲಾ ಕಾರ್ಯಗಳನ್ನು ಮಕ್ಕಳೇ ಮಾಡಿದ್ದು ವಿಶೇಷವಾಗಿತ್ತು. ಈ ಕಾರ್ಯದಲ್ಲಿ ಆಯಿಶತ್ ಸಫ್ನ, ನಾಝ್ಮೀನ ಹಾಗೂ ಅಬ್ದುಲ್ ಖಾದರ್ ನಾದಿಮ್ ಮೊದಲದವರು ಸಹಕರಿಸಿದರು. ನಂತರ ಮುಖ್ಯ ಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆಯ ಪ್ರಕ್ರಿಯೆಯು ನಡೆಯಿತು. ಶಾಲಾ ವಿದ್ಯಾರ್ಥಿನಿ ವಿಶ್ಮಿತ ಸುಮಾರು 15 ಮತಗಳ ಅಂತರದಿಂದ ಜಯಗಳಿಸಿದಳು. ಫಲಿತಾಂಶ ಪ್ರಕಟಗೊಳ್ಳುತ್ತಲೇ ವಿಜೇತ ಅಭ್ಯರ್ಥಿಯ ಬೆಂಬಲಿಗರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವಿಜಯ ಯಾತ್ರೆಯನ್ನೂ ಕೈಗೊಂಡರು. ಬಳಿಕ ನೂತನ ಮಂತ್ರಿ ಮಂಡಲ ರಚನೆಯನ್ನು ಪ್ರತಿಜ್ಞಾ ಸ್ವೀಕಾರದ ಮೂಲಕ ರಚಿಸಲಾಯಿತು. ಉಪನಾಯಕ ಹಾಗೂ ಕಲಾ ಮಂತ್ರಿಯಾಗಿ ದೀರಜ್ ಆರ್, ಆರೋಗ್ಯ ಮಂತ್ರಿಯಾಗಿ ಪವನ್ ಕುಮಾರ್ ಹಾಗೂ ಕ್ರೀಡಾ ಮಂತ್ರಿಯಾಗಿ ನಂದಿನಿ ಆಯ್ಕೆಗೊಂಡರು.

ನಾಮ ಪತ್ರ ಸಲ್ಲಿಕೆ




ಚುನಾವಣಾ ಪ್ರಕ್ರಿಯೆ ಆರಂಭ


ಸರದಿ ಸಾಲಿನಲ್ಲಿ ನಿಂತಿರುವ ಮತದಾರರು

ಚುನಾವಣಾ ಗುರುತನ್ನು ಹಾಕುತ್ತಿರುವುದು




ಗೌಪ್ಯ ಮತದಾನ





ಮತ ಎಣಿಕೆ ಪ್ರಕ್ರಿಯೆ


ವಿಜಯಿ ಅಭ್ಯರ್ಥಿಗೆ ಅಭಿನಂದನೆ



ಬೆಂಬಲಿಗರೊಂದಿಗೆ ವಿಜಯಿ ಯಾತ್ರೆ...



ಸರಕಾರದ ವತಿಯಿಂದ ದೊರಕಿದ ಉಚಿತ ಸಮವಸ್ತ್ರ ಹಾಗೂ ಶಾಲಾ ಆಡಳಿತ ಮಂಡಳಿ ನೀಡಿದ ಕೊಡೆಗಳ ವಿತರಣೆ

        ಸರಕಾರದ ವತಿಯಿಂದ ದೊರಕಿದ ಉಚಿತ ಸಮವಸ್ತ್ರ ಹಾಗೂ ಶಾಲಾ ಆಡಳಿತ ಮಂಡಳಿ ನೀಡಿದ ಕೊಡೆಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರು ನೀಡುತ್ತಿರುವುದು.




Wednesday 30 July 2014

ಬಾಲ ಸಭೆಯ ಉದ್ಘಾಟನೆ


     2014-15 ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲ ಬಾಲ ಸಭೆಯು ತಾ. 04-07-2014 ನೇ ಬುಧವಾರದಂದು ನಡೆಸಲಾಯಿತು. ಬಾಲ ಸಭೆಯ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಚಾರ್ಟಿಗೆ ಬಣ್ಣ ಕೊಟ್ಟು ಉದ್ಘಾಟಣಾ ವಾಕ್ಯವನ್ನು ಅನಾವರಣಗೊಳಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದರು. ಪ್ರತೀ ತರಗತಿಯ ಮಕ್ಕಳ ಹಸ್ತಪತ್ರಿಕೆಗಳನ್ನು ಮಕ್ಕಳೇ ಬಿಡುಗಡೆಗೊಳಿಸಿದರು. ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಇದೇ ಸಂದರ್ಭದಲ್ಲಿ ತಿಂಗಳ ರಸಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ದೀರಜ್ ಆರ್ ಕಾರ್ಯಕ್ರಮ ನಿರೂಪಿಸಿದನು.












ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ


       ತಾ. 26-06-2014 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಮಕ್ಕಳಿಗೆ ತಿಳಿಹೇಳಿದರು. ಬಳಿಕ 'ಮಾದಕ ವಸ್ತು'ವೆಂಬ ಪ್ರತಿಕೃತಿಯನ್ನು ದಹಿಸಲಾಯಿತು. ನಂತರ ಮಕ್ಕಳು ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆಗೈದರು.






ಶಾಲಾ ಮಕ್ಕಳಿಗೆ ಕೇರಳ ಗ್ರಾಮೀಣ ಬ್ಯಾಂಕ್ ವತಿಯಿಂದ ಕೊಡೆ ವಿತರಣೆ


        ಕೇರಳ ಗ್ರಾಮೀಣ ಬ್ಯಾಂಕ್ ವತಿಯಿಂದ ನಮ್ಮ ಶಾಲಾ ಬಡ ಮಕ್ಕಳಿಗೆ ಕೊಡೆ ವಿತರಣಾ ಕಾರ್ಯಕ್ರಮವು ತಾ. 23-06-2014 ನೇ ಸೋಮವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂದಕ ಶ್ರೀ ವಿಶ್ವನಾಥ ಪಿ ಉದ್ಯಾವರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇರಳ ಗ್ರಾಮೀಣ ಬ್ಯಾಂಕಿನ ರೀಜನಲ್ ಮೇನೇಜರ್ ಶ್ರೀ ದಾಮೋದರ್, ಕುಂಜತ್ತೂರು ಕೇರಳ ಗ್ರಾಮೀಣ ಬ್ಯಾಂಕಿನ ಮೇನೇಜರ್ ಶ್ರೀ ಶೇಷಾಚಲ, ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ'ದ ಕೋಶಾಧಿಕಾರಿ ಶ್ರೀ ವಿಶ್ವನಾಥ ಸಿ ಉದ್ಯಾವರ್, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊಡೆ ವಿತರಿಸಿದ ಕೇರಳ ಗ್ರಾಮೀಣ ಬ್ಯಾಂಕ್ ಹಾಗೂ ಸಹಕರಿಸಿದ ಶ್ರೀ ಭಾಸ್ಕರ್ ಕೆ ಉದ್ಯಾವರ್ ಅವರಿಗೆ ಶಾಲಾ ಪ್ರಬಂದಕ ಶ್ರೀ ವಿಶ್ವನಾಥ ಪಿ ಉದ್ಯಾವರ್ ಧನ್ಯವಾದವನ್ನಿತ್ತರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರು ಸ್ವಾಗತಿಸಿ, ಶಾಲಾ ಅಧ್ಯಾಪಿಕೆಯಾದ ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ ನಿರೂಪಿಸಿದರು.










ವಾಚನಾ ಸಪ್ತಾಹ


      ಕೇರಳದ ಪ್ರಸಿದ್ಧ ಕವಿ ಹಾಗೂ ಗ್ರಂಥಾಲಯ ಚಟುವಟಿಕೆಯ ಜನಕ ಪಿ.ಯನ್ ಪಣಿಕ್ಕರ್ ರವರ ಚರಮ ದಿನವಾದ ತಾ. 19-06-2014 ನೇ ಗುರುವಾರದಂದು ವಾಚನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ವಾಚನಾ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ನಡೆಸಲಾಯಿತು. ಶಾಲಾ ಮಕ್ಕಳಿಗೆ ರಸಪ್ರಶ್ನೆ, ಟಿಪ್ಪಣಿ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.