....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Wednesday 30 September 2015

ಪಿ.ಟಿ.ಎ ಹಾಗೂ ಕ್ಲಾಸ್ ಪಿ.ಟಿ.ಎ ಸಭೆ

            2015-16 ನೇ ಸಾಲಿನ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆಯುವ ವಿವಿಧ ಮೇಳಗಳು, ಕಲೋತ್ಸವ ಹಾಗೂ ಕ್ರೀಡಾ ಕೂಟದ ಕುರಿತಾಗಿ ಚರ್ಚಿಸಲು ತಾ. 30-09-2015 ನೇ ಬುಧವಾರದಂದು ಶಾಲಾ ಪಿ.ಟಿ.ಎ ಸಭೆಯನ್ನು ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ಕಾಲು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ವಿತರಣೆ ಹಾಗೂ ಮಕ್ಕಳ ಕಲಿಕಾಭಿವೃದ್ಧಿಯ ಕುರಿತಾಗಿ ಚರ್ಚಿಸಲು ಕ್ಲಾಸ್ ಪಿ.ಟಿ.ಎ ಯ ಸಭೆಯನ್ನೂ ನಡೆಸಲಾಯಿತು.


Monday 28 September 2015

ಭಗತ್ ಸಿಂಗ್ ಹಮರ್ ರಹೇ..

          ಕೆಚ್ಚೆದೆಯ ಭಂಟ, ಬಿಸಿರಕ್ತದ ಯುವಕ, ಬ್ರಿಟೀಷರ ಎದುರಿಗೆ ಎದೆಯುಬ್ಬಿಸಿ ಹೋರಾಡಿ, ದೇಶಕ್ಕಾಗಿ ತನ್ನ 24 ನೇ ವಯಸ್ಸಿನಲ್ಲೇ ವೀರ ಮರಣವನ್ನಪ್ಪಿದ ಶಹೀದ್ ಭಗತ್ ಸಿಂಗ್ ರವರ 108 ನೇ ಜನ್ಮ ದಿನದ ಹಾರ್ದಿಕ ಶುಭಾಶಯಗಳು

Wednesday 23 September 2015

ಬಕ್ರಿದ್ ಹಬ್ಬದ ಶುಭಾಶಯಗಳು

                ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಹಾರ್ದಿಕ ಶುಭಾಶಯಗಳು

Monday 21 September 2015

ಶ್ರೀ ನಾರಾಯಣ ಗುರು ಸಮಾಧಿ ದಿನ


                  
                   ಇಂದು ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರುಗಳ ಸಮಾಧಿ.
ಶಿಷ್ಯ: ಆಡು ದನಗಳ ಹಾಲು ಕುಡಿಯುತ್ತೇವೆ. ಅವುಗಳ ಮಾಂಸ ತಿಂದರೆ ತಪ್ಪೇನು? ಅದು ಅಪಾಯಕಾರಿಯೇ?
ನಾರಾಯಣ ಗುರು: ಎಂಥ ಅಪಾಯ? ನಿಮ್ಮ ತಾಯಿ ಬದುಕಿದ್ದಾಳೆಯೇ?
ಶಿಷ್ಯ: ಇಲ್ಲ
ನಾರಾಯಣ ಗುರು: ಅವಳನ್ನು ಸಮಾಧಿ ಮಾಡಿದೆಯೋ? ಕತ್ತರಿಸಿ ತಿಂದುಬಿಟ್ಟೆಯೋ?
ಮೇಲ್ಕಂಡ ಈ ಪ್ರಸಂಗ ಶ್ರೀ ನಾರಾಯಣ ಗುರುಗಳ ನಡೆ-ನುಡಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಬಸವಣ್ಣನಂತೆ ಜಾತಿ ವ್ಯವಸ್ಥೆ ವಿರುದ್ಧ ಆಂದೋಲನಗಳನ್ನು ನಡೆಸಿದ ನಾರಾಯಣ ಗುರು, ಶೋಷಿತರ ಉದ್ಧಾರಕ. ಇವರ ಅಂದಿನ ಕೆಲಸಗಳತ್ತ ಕಣ್ಣಾಯಿಸಿದರೆ, 'ನಾರಾಯಣ ಗುರುದೇವನಿಗಿಂತ ಶ್ರೇಷ್ಠನಾದ ಮತ್ತೊಬ್ಬ ಗುರುವನ್ನು, ಕೆಚ್ಚೆದೆಯ ಮತ್ತೊಬ್ಬ ಸುಧಾರಕನನ್ನು, ಪವಿತ್ರನಾದ ಸಂತನನ್ನು, ಮೇಲಾಗಿ ಅವರನ್ನು ಮೀರಿಸುವ ರಾಷ್ಟ್ರ ನಿರ್ಮಾಪಕನನ್ನು ಇಂಡಿಯಾ ಕಂಡಿಲ್ಲ' ಎನ್ನುವ ಸ್ವಾಮಿ ಧರ್ಮತೀರ್ಥರ ಮಾತಿನಲ್ಲಿ ಅತಿಶಯವೇನಿಲ್ಲ ಅನ್ನಿಸುತ್ತದೆ.
ಕೇರಳದ ತಿರುವನಂತಪುರ ಬಳಿಯ ಚೆಂಪಜಂತಿಯಲ್ಲಿ ಸಾಮಾನ್ಯ ಮಧ್ಯಮ ವರ್ಗದ ಈಳವರ ಕುಟುಂಬದಲ್ಲಿ ಜನಿಸಿದ ಈ ನಾರಾಯಣ, ನಂತರದ ದಿನಗಳಲ್ಲಿ ಗುರುವಾಗಿ ಬದಲಾದರು. ಅವರು ಮದನ್ ಆಸನ್ ಮತ್ತು ಕೊಚ್ಚು ಪೆಣ್ಣು ದಂಪತಿಯ ಏಕೈಕ ಪುತ್ರ ಸಂತಾನ(ಜನನ 1856ರ ಆ.22). ಆಸನ್ ಎಂದರೆ ಆಚಾರ್ಯ ಎಂದರ್ಥ. ಹೀಗಾಗಿ ನಾರಾಯಣ ಗುರುಗಳ ತಂದೆ ಮದನ್ ಆಸನ್, ಉಪಾಧ್ಯಾಯ ಕೆಲಸ ಮಾಡಿರಬಹುದು. ತಮ್ಮ ಮಗನಿಗೆ ಇಟ್ಟ ಹೆಸರು ನಾರಾಯಣ. ಹೆತ್ತವರು ಪ್ರೀತಿಯಿಂದ ನನೂ ಎಂದೂ ಕರೆಯುತ್ತಿದ್ದರು.
ಬಾಲ್ಯದಲ್ಲಿಯೇ ನಾರಾಯಣ, ತಮ್ಮ ವಿಚಾರಗಳಿಂದ ಎಲ್ಲರ ಗಮನ ಸೆಳೆದರು. ನೈವೇದ್ಯಕ್ಕೆ ಇಟ್ಟಿದ್ದ ತಿಂಡಿತಿನಿಸು ಅಥವಾ ಹಣ್ಣುಗಳನ್ನು ಅವರು ತಿಂದು ಬಿಡುತ್ತಿದ್ದರು. ಈ ಕೃತ್ಯವನ್ನು ಪ್ರಶ್ನಿಸಿದರೆ, ''ದೇವರು ತಾನೇ ಸಷ್ಟಿಸಿದ ವಸ್ತುಗಳನ್ನು ತಾನೇ ತಿಂದರೆ ಜೀವಿಗಳ ಗತಿಯೇನು? ಅವನು ಮನುಷ್ಯರ ಮುಖಾಂತರವೇ ತಿನ್ನಬೇಕು. ಮಕ್ಕಳು ತಿಂದರಂತೂ ಅವನಿಗೆ ಹೆಚ್ಚಿನ ತಪ್ತಿ,'' ಎನ್ನುವ ಮೂಲಕ ನಾರಾಯಣ, ಹೆತ್ತವರ ಬಾಯಿ ಮುಚ್ಚಿಸುತ್ತಿದ್ದ.
ಒಂದು ಸಲ ಕೆಳ ಜಾತಿಯವರು ಒಲೆಯ ಮೇಲೆ ಗಂಜಿ ಇಟ್ಟು ಬೇರೆ ಇನ್ನೇನೋ ಕೆಲಸದಲ್ಲಿ ತೊಡಗಿದ್ದರು. ಅದೇ ಮಾರ್ಗದಲ್ಲಿ ಬಂದ ನಾರಾಯಣ, ಕಾದು ಉಕ್ಕುತ್ತಿದ್ದ ಗಂಜಿಯನ್ನು ಕೆಳಕ್ಕೆ ಇಳಿಸಿದ್ದ. ಈ ಬಗ್ಗೆ ತಂದೆ ಆಕ್ಷೇಪಿಸಿದಾಗ, 'ನಾನು ಗಂಜಿಯನ್ನು ಕೆಳಗೆ ಇಳಿಸದಿದ್ದರೆ, ಆ ಕುಟುಂಬ ಹಸಿವಿನಿಂದ ಇಂದು ಸಾಯಬೇಕಿತ್ತು' ಎಂದಿದ್ದ. ನಾರಾಯಣ ಗುರುಗಳ ಬಗ್ಗೆ ದೇಜಗೌ ಬರೆದಿರುವ ಪುಸ್ತಕದಲ್ಲಿ ಇಂಥ ಅನೇಕ ಘಟನೆಗಳು ದಾಖಲಾಗಿವೆ.
ಶೂದ್ರರ ಶಿಕ್ಷಣಕ್ಕೆ ದೇಶದೆಲ್ಲೆಡೆ ವಿರೋಧವಿದ್ದ ಕಾಲವದು. ಆದರೆ ಕೇರಳದಲ್ಲಿ ವಾತಾವರಣ ಅಷ್ಟು ಹದಗೆಟ್ಟಿರಲಿಲ್ಲ. ಹೀಗಾಗಿ ನಾರಾಯಣ ಗುರು ವ್ಯಾಸಂಗಕ್ಕೆ ಅಷ್ಟಾಗಿ ತೊಡಕಾಗಲಿಲ್ಲ. ವಂಶಪಾರಂಪರ್ಯವಾಗಿ ಬಂದಿದ್ದ ವೈದ್ಯ ವೃತ್ತಿಯನ್ನೂ ಅವರು ಮರೆತಿರಲಿಲ್ಲ. ವಿದ್ಯಾರ್ಥಿ ದಿನಗಳಲ್ಲಿಯೇ ಅವರು ಬಡವರ ಗುಡಿಸಲುಗಳಿಗೆ ಹೋಗಿ, ಔಷಧ ಕೊಟ್ಟು ಬರುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬುತ್ತಿದ್ದರು. ಬದುಕಿನ ಕೊನೆ ಉಸಿರಿರುವ ತನಕ, ಆರೋಗ್ಯಕರ ಸಮಾಜಕ್ಕಾಗಿ ಇವರ ಮನಸ್ಸು ಮಿಡಿಯುತ್ತಿತ್ತು.

Thursday 17 September 2015

ಗಣೇಶ ಚತುರ್ಥಿಯ ಶುಭಾಶಯಗಳು

ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

Saturday 5 September 2015

ಶಿಕ್ಷಕರ ದಿನಾಚರಣೆ

             ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳು ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಹಾಗೂ ಶಿಕ್ಷಕ ವೃಂದದವರಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೂಗುಚ್ಛ ನೀಡಿ ಶುಭ ಕೋರಿದರು. ವಿದ್ಯಾರ್ಥಿ ಕುಮಾರಿ ವರ್ಷಾ ಸ್ವಾಗತಿಸಿ, ಶಾಲಾ ವಿದ್ಯಾರ್ಥಿ ಉಪನಾಯಕ ಕೀರ್ತನ್ ವಂದಿಸಿದರು. ಶಾಲಾ ನಾಯಕಿ ನಿಹಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಶಿಕ್ಷಕ ವೃಂದದವರಿಗೆ ವಿವಿಧ ಸ್ಪರ್ಧೆಗಳನ್ನು ಮಕ್ಕುಳು ಆಯೋಜಿಸಿದರು.







ಶಿಕ್ಷಕರ ದಿನಾಚರಣೆಯ ಶುಭಾಶಯಗಳು...

              ಒಂದೊಳ್ಳೆ ಗುರಿಯನ್ನು ತಲುಪಲು ಒಬ್ಬ ಗುರುವಿನ ಮಾರ್ಗದರ್ಶನ ಅತಿ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಾಪಕ ಪ್ರಮುಖ ಪಾತ್ರ ವಹಿಸುತ್ತಾನೆ. ಜಗತ್ತಲ್ಲಿ ಕೆಟ್ಟ ತಂದೆ-ತಾಯಿ ಇರಲಾರರು ಎಂಬುದು ಎಷ್ಟು ಸತ್ಯವೋ ಕೆಟ್ಟ ಅಧ್ಯಾಪರೂ ಇರಲಾರರು ಎಂಬುದು ಅಷ್ಟೆ ಸತ್ಯ. ಇದ್ದರೂ ಅವರು ಆ ಸ್ಥಾನಕ್ಕೆ ಅರ್ಹರಲ್ಲ.
ಭಾರತ ಕಂಡ ನೆಚ್ಚಿನ ಅಧ್ಯಾಪಕರಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಪ್ರಮುಖರೆನಿಸುತ್ತಾರೆ. 1888 ಸಪ್ಟಂಬರ್ 5 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸರ್ವಪಳ್ಳಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿಗೆ ಹುಟ್ಟಿದ ಸರ್ಪಳ್ಳಿ ರಾಧಾಕೃಷ್ಣನ್ ತನ್ನ ನೆಚ್ಟಿನ ಅಧ್ಯಾಪನ ವೃತ್ತಿಯನ್ನೆ ಆಯ್ಕೆ ಮಾಡಿಕೊಂಡರು. ಅದರಲ್ಲೆ ಹಂತ-ಹಂತವಾಗಿ ಮೇಲೇರಿದ ರಾಧಾಕೃಷ್ಣನ್ 1952 ರಲ್ಲಿ ದೇಶದ ಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇದೇ ಸಮಯದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯು ಲಭಿಸಿತು. ಡಾ. ರಾಜೇಂದ್ರ ಪ್ರಸಾದ್ ನಂತರ 1962ರಲ್ಲಿ ಭಾರತದ ಮೊದಲ ಪ್ರಜೆಯಾಗಿ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದರು.
ತನ್ನ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕೆಂಬ ಇಂಗಿತವನ್ನು ಹೊಂದಿದ್ದ ಎಸ್. ರಾಧಾಕೃಷ್ಣನ್ ಅವರ ಮಹದಾಸೆಯಂತೆ ಸೆಪ್ಟಂಬರ್ 5 ನ್ನು 'ಶಿಕ್ಷಕರ ದಿನ'ವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.
ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವುದರೊಂದಿಗೆ ದೇಶಕ್ಕೆ ಸಮರ್ಥ ಪ್ರಜೆಗಳನ್ನು ನೀಡುವ ಜವಾಬ್ದಾರಿಯನ್ನು ಹೂತ್ತಿರುವ ಗೌರವಯುತ ಅಧ್ಯಾಪಕ ಬಂಧುಗಳಿಗೆ 'ಶಿಕ್ಷಕ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು....

Friday 4 September 2015

ಜನ್ಮಾಷ್ಟಮಿಯ ಶುಭಾಶಯಗಳು

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು...

Thursday 3 September 2015

ತರಕಾರಿ ಬೀಜ ವಿತರಣೆ

           ಕೃಷಿ ಇಲಾಖೆಯಿಂದ ದೊರೆತ ತರಕಾರಿ ಬೀಜಗಳ ವಿತರಣೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸಿದರು.


Wednesday 2 September 2015

ಕಂಪ್ಯೂಟರ್ ಕೊಡುಗೆ

          ಶ್ರೀ ಸುದರ್ಶನ್ ಬಾನು ಉದ್ಯಾವರ್ ಇವರು ನಮ್ಮ ಶಾಲೆಗೆ ಒಂದು ಕಂಪ್ಯೂಟರ್'ನ್ನು ಉದಾರವಾಗಿ ನೀಡಿದ್ದಾರೆ. ಅವರಿಗೆ ನಮ್ಮ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರಿಂದ ಅನಂತಾನಂತ ಧನ್ಯವಾದಗಳು..