....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday 23 June 2016

ಶುಭ ವಿದಾಯದ ಮನದಾಳದ ಮಾತು

            ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತನಿಂದೆತ್ತ ಸಂಬಂಧವಯ್ಯ....!!!?? ಈ ಸಂಬಂಧವೇ ಹೀಗೆ, ಎಲ್ಲವೂ ಆಕಸ್ಮಿಕ ಅನಿರೀಕ್ಷಿತ. ಜೀವನದ ತಿರುವುಗಳು ಬಾಳನೌಕೆಯನ್ನು ಯಾವುದೋ ರಹದಾರಿಯಲ್ಲಿ ಕೊಂಡೊಯ್ಯುತ್ತವೆ. ಈ ಸಮಯದಲ್ಲಿ ಕಲಿಯುವ ಪಾಠ ಜೀವನವನ್ನು ಇನ್ನಷ್ಟು ಸುಂದರವಾಗಿಸುತ್ತದೆ.
           ನನ್ನ ಅಧ್ಯಾಪನ ವೃತ್ತಿ ಜೀವನದ ಮೊದಲ ಮೆಟ್ಟಿಲು ಕಣ್ವತೀರ್ಥದಲ್ಲಿರುವ ಉದ್ಯಾವರ ಭಗವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾಯಿತು. ಹೋರಾಟದ ಸೆಲೆಯಲ್ಲಿ ಮುಂದೋಡುವ ಕಾಯಕ. ಪರಿಸ್ಥಿತಿಯನ್ನರಿತು ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾಗಿತ್ತು. ಇರುವ ಸ್ಥಾನ, ಪಡೆದ ಸಂಸ್ಥೆಯನ್ನು ಉಳಿಸಿ ಬೆಳೆಸುವ ದಾರಿ ಬಲು ಕಠಿಣವಾಗಿದ್ದರೂ ಆಗ ನಮ್ಮೊಂದಿಗೆ ಕೈ ಜೋಡಿಸಿದವರು ಶಾಲಾ ಆಡಳಿತ ಸಮಿತಿ, ಶಿಕ್ಷಕ ವೃಂದ, ರಕ್ಷಕರು ಹಾಗೂ ಊರ ಶಾಲಾ ಹಿತೈಷಿಗಳು. ಆಗಲೇ ನಾನು ನನ್ನ ಸ್ಥಾನವನ್ನು ನಾ ತಿಳಿದುಕೊಂಡದ್ದು. ಶಾಲೆಯ ಪ್ರತಿಯೊಂದು ಆಗುಹೋಗುಗಳಲ್ಲಿ ಸಿಕ್ಕ ಬೆಂಬಲ, ಪ್ರೋತ್ಸಾಹ ಎಲ್ಲವನ್ನೂ ಸುಲಲಿತವಾಗಿ ನಡೆಸಲು ಸಹಾಯವಾಯಿತು. ಈ ಸಂದರ್ಭದಲ್ಲಿ ನಾನು ಗಳಿಸಿದ ಪ್ರೀತಿ, ಸ್ನೇಹ, ಗೌರವ ಜೀವನದಲ್ಲಿ ಸಾರ್ಥಕತೆಯನ್ನು ಪಡೆದಂತಿತ್ತು. ಎಲ್ಲವೂ ಆ ಭಗವತೀ ಮಾತೆಯ ಅನುಗ್ರಹ. ಸುಮಾರು 7 ವರ್ಷಗಳ ಕಾಲ ಸಾರ್ಥಕ ವೃತ್ತಿ ಜೀವನವನ್ನು ಸವೆಸಿದುದು ಎಲ್ಲವೂ ನಿನ್ನೆ-ಮೊನ್ನೆಯಲ್ಲಿ ನಡೆದಂತಿದ್ದು ಕಣ್ಣಿಗೆ ಕಟ್ಟಿದಂತಿದೆ.
       ಆದರೆ ಎಲ್ಲವೂ ವಿಧಿಲಿಖಿತ. ಜೀವನದಲ್ಲಿ ಬರುವ ತಿರುವುಗಳಿಗೆ ತಲೆ ಬಾಗಲೇ ಬೇಕಾದ ಅನಿವಾರ್ಯತೆ. ಅನಿರೀಕ್ಷಿತವೆಂಬಂತೆ ಸರಕಾರಿ ನೇಮಕಾತಿಯ ಅಧ್ಯಾಪಕ ಹುದ್ದೆಗೆ ಆಯ್ಕೆಯಾದಾಗ ಖುಷಿಯೊಂದಿಗೆ ಸಂಧಿಗ್ಧ ಪರಿಸ್ಥಿತಿಯ ಅನುಭವವಾಯಿತು. 7 ವರ್ಷದ ಒಡನಾಟದ ವೃತ್ತಿ ಜೀವನದ ಮುಂದೆ ಬಂದ ಅವಕಾಶವು ಗೌನವಾಗಿ ಕಂಡರೂ ಪರಿಸ್ಥಿತಿಯನ್ನು ಅರಿತು ಮುಂದುವರಿಯಬೇಕಾಯಿತು. ಕೊನೆಗೂ ಭಾರವಾದ ಮನಸ್ಸಿನಿಂದ ಸರಕಾರಿ ಶಾಲೆಯಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ತೀರ್ಮಾನಿಸಿದ್ದೇನೆ.
       ಈ ಸಂದರ್ಭದಲ್ಲಿ ಇಲ್ಲಿಯವರೆಗೆ ನನ್ನನ್ನು ಸಲಹಿ ಪೋಷಿಸಿದ ಉದ್ಯಾವರ ಭಗವತಿ ಕಿರಿಯ ಪ್ರಾಥಮಿಕ ಶಾಲೆ, ಕಣ್ವತೀರ್ಥದ ಎಲ್ಲಾ ಶಿಕ್ಷಕ ವೃಂದ, ಮಕ್ಕಳ ರಕ್ಷಕರು, ಆಡಳಿತ ಸಮಿತಿ, ಊರ ಬಾಂಧವರು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಕ್ಕಳ ನಿಷ್ಕಲ್ಮಶ ಪ್ರೀತಿಗೆ ನಾ ಮೂಕನಾಗಿದ್ದೇನೆ. ಅದಕ್ಕೆ ಬೆಲೆ ಕಟ್ಟಲಾಗದು. ನಿಮ್ಮ ಪ್ರೀತಿ, ಸ್ನೇಹ, ಗೌರವಗಳಿಗೆ ನಾ ಯಾವತ್ತೂ ಚಿರಋಣಿ. ಮುಂದೆಯೂ ಇದು ಹೀಗೆ ಇರಲಿ ಎಂದು ಆಶಿಸುವ......
ನಿಮ್ಮವನೇ.... 'ಜೆ.ಪಿ'



No comments:

Post a Comment